ಮೈತ್ರಕ ಕ್ರಿ.ಶ. 5ರಿಂದ 8ನೆಯ ಶತಮಾನದ ತನಕ ಪಶ್ಚಿಮ ಮಾಳವ ಮತ್ತು ಸೌರಾಷ್ಟ್ರ ಪ್ರದೇಶವನ್ನು ಆಳಿದ ಒಂದು ರಜಪೂತ ವಂಶ. ಹೂಣರ ದಾಳಿಗಳಿಂದ ಗುಪ್ತ ಸಾಮ್ರಾಜ್ಯ ಅಳಿದ ಮೇಲೆ ಉತ್ತರಭಾರತದಲ್ಲಿ ಹುಟ್ಟಿಕೊಂಡ ಹಲವು ರಾಜ್ಯಗಳಲ್ಲಿ ಮೈತ್ರಕರಾಜ್ಯವೂ ಒಂದು. ಭಟ್ಟಾರಕ ಈ ವಂಶದ ಮೂಲ ಪುರುಷ. ವಲ್ಲಭಿ ಈ ರಾಜ್ಯದ ರಾಜಧಾನಿ. ಗುಪ್ತ ಅಥವಾ ಗುಪ್ತವಲ್ಲಭಿಶಕೆಗಳಲ್ಲಿ ಕಾಲಸೂಚಿತವಾಗಿರುವ ಅನೇಕ ಮೈತ್ರಕಶಾಸನಗಳು ಲಭ್ಯವಾಗಿದ್ದರೂ ಅವುಗಳಲ್ಲಿ ಸಾಕಷ್ಟು ಚಾರಿತ್ರಿಕ ಮಾಹಿತಿಗಳೂ ಇಲ್ಲ. ಈ ವಂಶದ ಪ್ರಾಚೀನತಮ ದಾಖಲೆ ಎಂದರೆ 502ರಲ್ಲಿ ಮಹಾರಾಜ ದ್ರೋಣಸಿಂಹ ಹೊರಡಿಸಿದ ದಾನಶಾಸನ. ಭಟ್ಟಾರಕನ ಕಾಲ 465 ಮತ್ತು 475ರ ನಡುವೆ ಎಂದು ತಾತ್ಕಾಲಿಕವಾಗಿ ನಿರ್ಧರಿಸಲಾಗಿದೆ. 

ಭಟ್ಟಾರಕ ಮತ್ತು ಆತನ ಮಗ ಒಂದನೆಯ ಧರಸೇನ ತಮ್ಮನ್ನು `ಸೇನಾಪತಿ' ಎಂದು ಕರೆದುಕೊಂಡರು. ಆದ್ದರಿಂದ ಇವರು ಗುಪ್ತರ ಪ್ರತಿನಿಧಿಗಳಾಗಿ ಆಡಳಿತ ನಡೆಸಿದ್ದಿರಬಹುದೆಂದು ತಿಳಿಯಬಹುದು. ಭಟ್ಟಾರಕನ ಎರಡನೆಯ ಮಗ ದ್ರೋಣ ಸಿಂಹ `ಮಹಾರಾಜ' ಎನ್ನುವ ಬಿರುದು ಧರಿಸಿದ. ಈತನ ಪಟ್ಟಾಭಿಷೇಕವನ್ನು ಗುಪ್ತಸಾಮ್ರಾಟ ಬಂಧಗುಪ್ತನೇ (467-95) ನೆರವೇರಿಸಬೇಕು. ಆದರೂ ಇವರಿಬ್ಬರ ನಡುವಣ ಸಂಬಂಧ ಸ್ವಾಮಿ-ಭೃತ್ಯಸ್ವರೂಪದ್ದಾಗಿತ್ತೆಂದು ತಿಳಿದುಬರುವುದು. ದ್ರೋಣಸಿಂಹನ ತರುವಾಯ ಅಧಿಕಾರಕ್ಕೆ ಬಂದ ಇವನ ತಮ್ಮ ಮಹಾರಾಜ ಧ್ರುವಸೇನೆ ಸ್ವತಂತ್ರರಾಜನೆಂಬಂತೆ ಭೂದಾನ ನೀಡಿದರೂ ಗುಪ್ತ ಸಾರ್ವಭೌಮತ್ವವನ್ನು ಒಪ್ಪಿಕೊಂಡಿದ್ದನೆಂಬುದಕ್ಕೆ ದಾಖಲೆಗಳಿವೆ.

ದ್ರೋಣಸಿಂಹನ ತರುವಾಯ ಪಟ್ಟಕ್ಕೆ ಬಂದ ಒಂದನೆಯ ಧ್ರುವಸೇನನನ್ನು (525-45) ಶಾಸನಗಳಲ್ಲಿ `ಪರಮಭಟ್ಟಾರಕಪಾದಾನುದ್ಯಾತ ಎಂದು ವರ್ಣಿಸಲಾಗಿದೆ. ಈತನ ತಮ್ಮ ಮಹಾರಾಜ ಧರಾಪಟ್ಟ. ಧರಾಪಟ್ಟನ ಮಗ ಗುಹಸೇನ (556-76) ಸಿಂಹಾಸನವೇರಿದನು. ಗುಹಸೇನನ ತರುವಾಯ ಅವನ ಮಗ ಇಮ್ಮಡಿ ಧರಾಸೇನ (571-90) ಹಾಗೂ ಮೊಮ್ಮಗ ಒಂದನೆಯ ಶಿಲಾದಿತ್ಯ ಧರ್ಮಾದಿತ್ಯ (606-12) ಅರಸರಾದರು. ಇಮ್ಮಡಿ ಧರಸೇನ ಮಹಾರಾಜಾಧಿರಾಜ ಎಂಬ ಬಿರುದನ್ನು ಧರಿಸಿದ. ಈತನ ಕಾಲದಲ್ಲಿ ರಾಜ್ಯ ವಿಸ್ತರಣೆಯಾಯಿತು. ಗಾರುಲಕ ವಂಶದ ಅಧಿಪರು ಮೈತ್ರಕರ ಸಾಮಂತರಾಗಿದ್ದರು.

640ರಲ್ಲಿ ವಲ್ಲಭಿಯ ಅರಸನಾಗಿದ್ದವನು ಇಮ್ಮಡಿ ಧ್ರುವಸೇನ. ಈತ ಶಿಲಾದಿತ್ಯನ ಸೋದರನ ಮಗ. 6ನೆಯ ಶತಮಾನದ ಅಂತ್ಯ ಹಾಗೂ 7ನೆಯ ಶತಮಾನದ ಆದಿಯ ಕಾಲದಲ್ಲಿ ಪಶ್ಚಿಮಭಾರತದಲ್ಲಿ ಮೈತ್ರಕ ರಾಜ್ಯ ಅತ್ಯಂತ ಪ್ರಭಾವಶಾಲಿಯಾಗಿತ್ತೆಂದು ತಿಳಿದುಬರುವುದು. 

ಒಂದನೆಯ ಶಿಲಾದಿತ್ಯನ ತರುವಾಯ ಆತನ ತಮ್ಮ ಖರಗ್ರಹ (616)ಹಾಗೂ ಖರಗ್ರಹನ ಮಗ ಇಮ್ಮಡಿ ಧರಸೇನ (623) ಅರಸರಾದರು. ಆದರೆ ಇವರ ಬಗೆಗೆ ಹೆಚ್ಚಿನ ವಿಷಯವೇನೂ ತಿಳಿದುಬರುವುದಿಲ್ಲ. ತರುವಾಯ ಅಧಿಕಾರಕ್ಕೆ ಬಂದ ಇಮ್ಮಡಿ ಧ್ರುವಸೇನ ಶಿಲಾದಿತ್ಯ 629ರ ಸುಮಾರಿಗೆ ಆಳ್ವಿಕೆಯನ್ನು ಆರಂಭಿಸಿದ. ಈತನ ಕಾಲದಲ್ಲಿ ಯುವಾನ್‍ಚಾಂಗ್ ಭಾರತಕ್ಕೆ ಬಂದಿದ್ದು ಶಿಲಾದಿತ್ಯ ಬೌದ್ಧಾಲಯವನ್ನು ನಿರ್ಮಿಸಿದ ಸಂಗತಿಯನ್ನು ತಿಳಿಸುತ್ತಾನೆ. ಸು. 640-41ರತನಕ ಈತ ರಾಜ್ಯವನ್ನಾಳಿದನೆಂದು ತೋರುತ್ತದೆ.

ಅನಂತರ ಅರಸನಾದ ನಾಲ್ಕನೆಯ ಧರಸೇನ (644-55) ಚಕ್ರವರ್ತಿ ಮುಂತಾದ ಸಾರ್ವಭೌಮ ಬಿರುದುಗಳನ್ನು ಪ್ರಥಮವಾಗಿ ಧರಿಸಿದ. ಈತ ಗೂರ್ಜರ ರಾಜ್ಯದ ಕೆಲವು ಪ್ರದೇಶಗಳನ್ನು ಜಯಿಸಿದ. ಮಹಾಕವಿ ಭಟ್ಟಿ ಈತನ ಆಸ್ಥಾನದಲ್ಲಿದ್ದ.

ನಾಲ್ಕನೆಯ ಧರಸೇನ ತರುವಾಯ ಸ್ವಲ್ಪ ಗೊಂದಲಮಯ ಪರಿಸ್ಥಿತಿ ಇತ್ತು. ಮುಮ್ಮಡಿ ಶಿಲಾದಿತ್ಯ (662-84) ಅತ್ಯಂತ ಸಮರ್ಥನೂ ಪ್ರಭಾವಶಾಲಿಯೂ ಆಗಿದ್ದ ಅರಸ. ಈತ ಗೂರ್ಜರ ಪ್ರದೇಶವನ್ನು ಗೆದ್ದ. ಚಾಳುಕ್ಯ, ರಾಷ್ಟ್ರಕೂಟ, ಶಾಸನಗಳು ಉಲ್ಲೇಖಿಸುವ ವಜ್ರಟ ಈತನೇ ಇರಬಹುದೆಂದೆ ಕೆಲವು ವಿದ್ವಾಂಸರು ಊಹಿಸಿದ್ದಾರೆ.

ಏಳನೆಯ ಶಿಲಾದಿತ್ಯ ಮೈತ್ರಕ ವಂಶದ ಕೊನೆಯ ಅರಸ. 766-67ರಲ್ಲಿ ಈತ ರಾಜ್ಯವಾಳುತ್ತಿದ್ದ.
ದಿವಿರಪತಿ, ಮಹಾಸಂಧಿವಿಗ್ರಹಾಕ್ಷಪಟಲಾಧಿಪತಿ, ಪ್ರಮಾತ್ಮ, ಆಯುಕ್ತಕ, ಕುಮಾರಮಾತೃ, ದ್ರಾಂಗಿಕ, ಧ್ರುವಾಧಿಕರಣಿಕ, ಚೌರೋದ್ಧರಣಿಕ, ದಂಡಪಾಶಿಕ, ರಾಜಾಸ್ಥಾನೀಯ. ಅನುತ್ಪನ್ನ ಸಮುದ್ಗ್ರಾಹಕ ಮುಂತಾದ ಹಲವು ಅಧಿಕಾರಿಗಳನ್ನು ಮೈತ್ರಕ ಶಾಸನಗಳು ಹೆಸರಿಸುತ್ತವೆ.

ಅರಬ್ ದಾಳಿಕಾರರಿಂದ ಈ ವಂಶದ ಆಳ್ವಿಕೆ ಅಂತ್ಯಗೊಂಡಿತೆಂದು ಕೆಲವು ವಿದ್ವಾಂಸರೂ ಮತ್ತೆ ಕೆಲವರು ಪ್ರತೀಕಾರರಿಂದ ಕೊನೆಗೊಂಡಿತೆಂದೂ ಹೇಳುತ್ತಾರೆ. ಒಟ್ಟಿನಲ್ಲಿ 767-83ರ ನಡುವಣ ಕಾಲದಲ್ಲಿ ಮೈತ್ರಕರ ಆಳ್ವಿಕೆ ಕೊನೆಗೊಂಡಿತು.		
	(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ